ಪೈಥಾನೋಮಾರ್ಫ
ಮೇಲಿನ ಕ್ರಿಟೇಷಸ್ ಕಾಲದಲ್ಲಿ ಜೀವಿಸಿದ್ದು ಈಗ ನಾಶವಾಗಿರುವ ಮಾಂಸಾಹಾರಿ, ಸಾಗರವಾಸಿ, ಸರೀಸೃಪಗಳ ಗುಂಪು. ಈ ಪ್ರಾಣಿಗಳನ್ನು ಹಿಂದಿನ ಮಾಂಸಾಹಾರಿ ಉಡಗಳಿಗೆ (ವೆರಾನಿಡೀ ಕುಟುಂಬದ ಪ್ರಾಣಿಗಳು) ಹೋಲಿಸಬಹುದು.  ಇವುಗಳ ದೇಹ ಬಲು ದೊಡ್ಡದಾಗಿಯೂ ಉದ್ದವಾಗಿಯೂ ಇತ್ತು; ದೇಹದ ಉದ್ದ 24-27 ಮೀ. ಇತ್ತೆನ್ನಲಾಗಿದೆ. ಇಂದಿನ ಉಡದ ತಲೆಯಂತೆಯೇ ಇರುವ ತಲೆ ಇದಕ್ಕೂ ಇತ್ತು. ಕೋಪ್ ಎಂಬ ಜೀವಶಾಸ್ತ್ರಜ್ಞನ ಅಭಿಪ್ರಾಯದಲ್ಲಿ ಇವು ಹಾವುಗಳನ್ನು ಹೋಲುವುವು. ಹಾವಿನಂಥ ದೇಹವುಳ್ಳ ಇವುಗಳಲ್ಲಿ ಚೆನ್ನಾಗಿ ಬೆಳೆದಿರುವ ಜಾಲಪಾದಗಳಿದ್ದುವು. ಉದಾಹರಣೆಗೆ ಮೋಸಸಾರಸ್ ಎಂಬುದು ಯೂರೋಪ್ ಹಾಗೂ ಉತ್ತರ ಅಮೆರಿಕಗಳಲ್ಲಿ 90-70 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿ.  ಸುಮಾರು 10 ಮೀ. ಉದ್ದ ಇದ್ದ ಇದಕ್ಕೆ ಬಲವಾದ ದೇಹ, ಭಾರಿ ದವಡೆಗಳು, ಹರಿತವಾದ ಹಲ್ಲುಗಳಿದ್ದುವು. ತನ್ನ ಬಲಯುತವಾದ ಜಾಲಪಾದಗಳಿಂದ ಈಜುತ್ತಿತ್ತು. ಇದರ ನಾಸಿಕ ರಂಧ್ರಗಳು ನೆತ್ತಿಯ ಮೇಲಿದ್ದುವು. ಮಾಂಸಾಹಾರಿಯಾಗಿದ್ದ ಇದು ಇತರ ಸಾಗರವಾಸಿಗಳಿಗೆ ಕಂಟಕಪ್ರಾಯವಾಗಿತ್ತು ಎನ್ನಲಾಗಿದೆ. 
											(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ